ಪ್ರೇತವಾದ

 	ತತ್ತ್ವಶಾಸ್ತ್ರದಲ್ಲಿ ಲೋಕಾಯತ ಅಥವಾ ಭೌತಿಕವಾದ? ವಿರುದ್ಧವಾದ ಆತ್ಮದ ಸ್ವತಂತ್ರ ಅಸ್ತಿತ್ವವಾದವನ್ನೆ ಈ ಹೆಸರಿನಿಂದ (ಸ್ಪಿರಿಚ್ಕಅಲಿಸಂ) ವ್ಯವಹರಿಸುವ ರೂಢಿಯಿದೆ. ಇದಕ್ಕೆ ಕ್ರಿಶ್ಚನ್ ಮುಂತಾದ ಧರ್ಮಗಳ ಪ್ರಭಾವವಲಯ ಸುತ್ತಿಕೊಂಡಿದೆ. ಈ ವಾದವನ್ನು ಒಪ್ಪುವವರು ಮೂಲತಃ ಎರಡು ವಿಷಯಗಳನ್ನು ಅಂಗೀಕರಿಸಬೇಕಾಗುತ್ತದೆ: 1. ಮರಣಾನಂತರವೂ ಮಾನವನ ಆತ್ಮ ಉಳಿದಿರುವುದನ್ನು ಒಂದಿಲ್ಲೊಂದು ರೀತಿಯಿಂದ ತೋರಿಸಲು ಶಕ್ಯವಿದೆ. 2. ಜೀವಂತವಿರುವ ಮಾನವರಿಗೆ ಕೂಡ ಮೃತರ ಆತ್ಮ ಅಥವಾ ಪ್ರೇತಗಳೊಡನೆ ವಿಶಿಷ್ಟ ಶಕ್ತಿಯ ಮಾಧ್ಯಮ ವ್ಯಕ್ತಿಗಳ ಮೂಲಕ ಸಂಪರ್ಕ ಸಾಧ್ಯ. ನಂಬಿಕೆಗಳಿಗೆ ಹೊಂದಿಕೊಂಡಂತೆ ಇನ್ನೂ ಕೆಲವು ನಂಬಿಕೆಗಳಿರುತ್ತವೆ. ಸಂಪರ್ಕಿಸಲ್ಪಟ್ಟ ಪ್ರೇತಗಳು ತಮ್ಮ ವಿನೂತನ ವಿಶ್ವದ ಸತ್ಯಸ್ವರೂಪವನ್ನೇ ಅರುಹುತ್ತವೆ. ಆ ಪ್ರೇತಗಳಿಗೆ ಸಂಚಾರಶಕ್ತಿಯಿದೆ. ಅವು ಭೌತಿಕ ಪದಾರ್ಥಗಳನ್ನೂ ಬೇಕಾದಂತೆ ಬದಲಿಸಬಲ್ಲವು. ಅವುಗಳ ಮಾತಿನಲ್ಲಿ ಒಂದು ಅತಿಮಾನುಷ ದಿವ್ಯಸ್ಛೂರ್ತಿ, ಇನ್ನೊಬ್ಬರ ಮನಸ್ಸನ್ನರಿಯುವ ಸಾಮಥ್ರ್ಯ, ಹಾಗೂ ಯಥಾರ್ಥತೆ ಇರುತ್ತದೆ ಇತ್ಯಾದಿ. ಹಳೆಯ ಪುರಾಣಕಥೆಗಳಲ್ಲಿ-ಸತ್ತ ಸ್ಯಾಮುಯೆಲ್ಲನ ಪ್ರೇತವನ್ನು ಎಂಡೋರನ ಮಾಟಗಾತಿ ಎಬ್ಬಿಸಿದಳೆಂದು ಬೈಬಲ್ ಉಲ್ಲೇಖ ಒಂದು ಉದಾಹರಣೆ-ಮತ್ತು ಪ್ರಾಚೀನ ಸಾಹಿತ್ಯಗಳಲ್ಲಿ ಈ ನಂಬಿಕೆ ವ್ಯಕ್ತವಾಗುತ್ತದೆ. ಆದರೆ ಆಧುನಿಕ ಯುಗದಲ್ಲಿ ಎಮ್ಯಾನುಯೆಲ್ ಸ್ವೀಡನ್ ಬರ್ಗ್, ಮೆಸ್‍ಮರ್, ಮುಂತಾದ ಲೇಖಕ-ಸಂಶೋಧಕರ ಪ್ರಯತ್ನಗಳಿಂದ ಸುಪ್ತಪ್ರಜ್ಞೆಯ ವಿವಿಧ ಸ್ತರಗಳ ವಿಷಯ ಎಲ್ಲರ ಗಮನ ಸೆಳೆಯುವಂತಾಗಿದೆ. ವೈಚಾರಿಕ ಮನೋವೃತ್ತಿಗಿಂತ ನಂಬಿಕೆಯ ಪ್ರವೃತ್ತಿಯೇ ಹೆಚ್ಚಾಗಿರುವ ಆಧುನಿಕ ಜನತೆಗೆ ಇದೊಂದು ಜನಪ್ರಿಯ ಧಾರ್ಮಿಕ ಮಾರ್ಗದಂತಾಗಿದೆ. ಜಾನ್‍ರಸ್ಕಿನ್, ಕಾನನ್ ಡಾಯಲ್, ಡಬ್ಲ್ಯು. ಇ. ಗ್ಲಾಡ್‍ಸ್ಟನ್ ಮುಂತಾದ ಲೇಖಕರು ಹಾಗೂ ರಾಜಕಾರಣಿಗಳು ಸರ್ ಆಲಿವರ್ ಲಾಡ್ಜ್ ಮುಂತಾದ ವಿಜ್ಞಾನಿಗಳೂ ಈ ಪಂಥದಲ್ಲಿ ಆಸಕ್ತಿ ತೋರಿದ್ದಾರೆ. 19ನೆಯ ಶತಮಾನದ ಕಡೆಕಡೆಗೆ ಪಾಶ್ಚಾತ್ಯರಲ್ಲಿ ಈ ಪಂಥ ಅತಿಯಾಗಿ ಬೆಳೆದು, ಕೆಲವೊಂದು ಮಾಧ್ಯಮ ವ್ಯಕ್ತಿಗಳು ಅಂತರ ರಾಷ್ಟ್ರೀಯ ಖ್ಯಾತಿಗಳಿಸಿದರು. ಇಂದ್ರಿಯಾತೀತ ಮನಶ್ಯಾಸ್ತ್ರದಲ್ಲಿ ಒಂದು ಹೊಸ ಸಂಶೋಧನಾಧ್ಯಾಯವೆ ಇದರಿಂದ ತೆರೆದಂತಾಯಿತು. 
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ